ರಾಯಚೂರು : ರಾಜ್ಯದಲ್ಲಿ ದೇವದಾಸಿಯರ ಸಮರ್ಪಕ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಯ ರಾಯಚೂರು ಜಿಲ್ಲಾ ಸಮಿತಿ ಸದಸ್ಯರು ನಗರದ ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.ವಯೋಮಿತಿ ಭೇದ ಇಲ್ಲದಂತೆ ಎಲ್ಲ ದೇವದಾಸಿ ಮಹಿಳೆಯರ ಸಮೀಕ್ಷೆ ನಡೆಸಬೇಕು. 2026ರ ಬಜೆಟ್‌ನಲ್ಲಿ ಮಾಸಿಕ ಪಿಂಚಣಿ ₹10 ಸಾವಿರ ನೀಡಬೇಕು. ದೇವದಾಸಿ ಮಹಿಳೆಯರ ಮಕ್ಕಳಿಗೆ ಉದ್ಯೋಗ ನೀಡಬೇಕು. ಇಲ್ಲದಿದ್ದರೆ ನಿರುದ್ಯೋಗ ಭತ್ಯೆ ₹10 ಸಾವಿರ ಕೊಡಬೇಕು ಎಂದು ಒತ್ತಾಯಿಸಿದರು.

1982ರ ಪೂರ್ವದಲ್ಲಿ ಜನಿಸಿದ ದೇವದಾಸಿ ಮಹಿಳೆಯರನ್ನು ಮಾತ್ರವೇ ಹೊಸ ಗಣತಿಯಲ್ಲಿ ಪರಿಗಣಿಸಿ ಆನಂತರ ಜನಿಸಿದವರನ್ನು ಗಣತಿಯಲ್ಲಿ ದಾಖಲೆ ಮಾಡಿಕೊಳ್ಳಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ. ಇದರಿಂದ ಹಲವರಿಗೆ ಅನ್ಯಾಯವಾಗಿದೆ ಎಂದು ತಿಳಿಸಿದರು.

ದೇವದಾಸಿ ಮಹಿಳೆಯರು ಮತ್ತು ಅವರ ಕುಟುಂಬದ ಮೂರು ತಲೆ ಮಾರಿನ ಸದಸ್ಯರಲ್ಲಿ ಒಬ್ಬರೂ ಸಹ ಸಮೀಕ್ಷೆಯಿಂದ ಹೊರಗೆ ಉಳಿಯದಂತೆ ಎಚ್ಚರಿಕೆ ವಹಿಸಬೇಕು. ಹಳೆಯ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ದೇವದಾಸಿ ಮಹಿಳೆಯರಿಗೆ ನಿವೇಶನ, ಮನೆ, ಭೂಮಿಯನ್ನು ಭೂ ಸ್ವಾಧೀನದ ಮೂಲಕ ಒದಗಿಸಬೇಕು. ನರೇಗಾ ಉಳಿಸಿ, ಜೀರಾಮ್ ಜೀ ರದ್ದುಪಡಿಸಿ, ಉದ್ಯೋಗ ಖಾತ್ರಿಯಲ್ಲಿ 200 ದಿನಗಳ ಕೆಲಸ ನೀಡಬೇಕು. ಕೂಲಿಯನ್ನು ₹ 1 ಸಾವಿರಕ್ಕೆ ಹೆಚ್ಚಿಸಬೇಕು. 2025ರ ವಿದ್ಯುತ್ ಮಸೂದೆ ವಾಪಾಸು ಪಡೆಯಬೇಕು ಎಂದು ಮನವಿ ಮಾಡಿದರು.

ರಾಯಚೂರು ತಾಲ್ಲೂಕಿನ 196 ಮಾಜಿ ದೇವದಾಸಿ ಮಹಿಳೆಯರಿಗೆ ಮಂಜೂರಾದ ಮನೆಗಳ ನಿರ್ಮಾಣ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಬೇಕು. ಐದು ವರ್ಷಗಳಿಂದ ತೆವಳುತ್ತ ಸಾಗಿರುವ ಕಾಮಗಾರಿಯ ವೇಗವನ್ನು ಹೆಚ್ಚಿಸಿ ಮನೆಗಳ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಕೆ.ಜಿ.ವೀರೇಶ. ಎಚ್.ಪದ್ಮಾ, ಮಹಾದೇವಿ ರೇಣುಕಮ್ಮ, ಹೊಸೂರಮ್ಮ. ಮಹಾದೇವಿ, ಬಡೆಮ್ಮ. ನರಸಮ್ಮ, ಅಂಜೀನಮ್ಮ, ಕೆಂಚಪ್ಪ, ಹುಸೇನಪ್ಪ, ನರಸಪ್ಪ, ಶರಣಪ್ಪ, ಬಸಂತಿ, ಮಾರೆಮ್ಮ, ಸುಜಾತಾ, ನರಸಿಂಹ, ಲಾಕಮ್ಮ.ಸಣ್ಣ ಯಲ್ಲಮ್ಮ, ಮುದ್ದಕಮ್ಮ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *