ಲಿಂಗಸುಗೂರು,ಜ.15:
ಸಾರ್ವಜನಿಕರು ಯಾವುದೇ ಜ್ವರವಿರಲಿ, ಮೊದಲು ರಕ್ತಲೇಪನ ಪರೀಕ್ಷೆ ಮಾಡಿಸಬೇಕು. ಇದರಿಂದ ಮಲೇರಿಯಾ ಸೇರಿದಂತೆ ಸೋಂಕಿತ ಸೊಳ್ಳೆಗಳ ಕಚ್ಚುವಿಕೆಯಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಸಾಧ್ಯವಾಗುವುದು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ, ಡಾ ಗಣೇಶ ಕೆ, ಜನತೆಗೆ ಮನವಿ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಲಿಂಗಸೂಗೂರು ತಾಲೂಕಿನ ಈಚನಾಳ, ಹಂಚಿನಾಳ, ಹಾಲಬಾವಿ ಮುಂತಾದಡೆಯ ದೊಡ್ಡಿಗಳಿಗೆ ಬೇಟಿ ನೀಡಿ ವಾರ್ಷಿಕ ಮಲೇರಿಯಾ ಕಾರ್ಯಚಟುವಟಿಕೆ ಪರೀಶಿಲಿಸಿ ಮಾತನಾಡುತ್ತಾ, ಮನೆಯ ಸುತ್ತಲಿನ ಹೊಲದಲ್ಲಿ, ಕುರುಚಲು ಅಡವಿಯಲ್ಲಿ ಎಲ್ಲಾದರೂ ಶಾಶ್ವತ ನೀರು ನಿಲ್ಲುವ ಸ್ಥಳಗಳಿದ್ದರೆ ಇಲಾಖೆಯ ಗಮನಕ್ಕೆ ತರಲು ಹಾಗೂ ಮನೆಯ ಸುತ್ತಲೂ ನೀರು ನಿಲ್ಲದಂತೆ ಜಾಗೃತಿ ವಹಿಸಿ ಮುಖ್ಯವಾಗಿ ಮಲೇರಿಯಾ, ಡೆಂಗ್ಯು, ಆನೆಕಾಲು ಮುಂತಾದ ರೋಗ ತಡೆಯಬಹುದಾಗಿದ್ದು,
ಮುಖ್ಯವಾಗಿ ಮಲೇರಿಯಾ ಜ್ವರವು ಪ್ಲಾಸ್ಮೋಡಿಯಂ ಎಂಬ ಪರಾವಲಂಭಿ ಸೂಕ್ಷ್ಮಾಣುವಿನಿಂದ ಉಂಟಾಗಬಹುದಾಗಿದ್ದು, ಹೆಣ್ಣು ಅನಾಫಿಲೀಸ್ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಚಳಿ, ನಡುಕ, ಬಿಟ್ಟು ಬಿಟ್ಟು ಜ್ವರ ಬರುವುದು, ವಾಕರಿಕೆ, ಮೈ ಬೆವರುವುದು ಲಕ್ಷಣಗಳು ಕಂಡು ಬಂದಲ್ಲಿ ಮಲೇರಿಯಾ ಜ್ವರ ಇರಬಹುದು ಎಂದು ಭಾವಿಸಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಲೆಪನ ಪರೀಕ್ಷೆಗೆ ಒಳಪಟ್ಟು ಖಚಿತಪಟ್ಟಲ್ಲಿ ಸೂಕ್ತ ಉಚಿತ ಚಿಕಿತ್ಸೆ ಪಡೆದು ಗುಣಮುಖರಾಗಬಹುದಾಗಿದೆ ಎಂದು ಹೇಳಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ ಅಮರೇಶ್ ಪಾಟೀಲ್ ಮಾಹಿತಿ ನೀಡುತ್ತಾ, ಮಲೇರಿಯಾ ಪ್ರಕರಣಗಳು ಕಂಡು ಬಂದ ಸಂದರ್ಭದಲ್ಲಿ ಮನೆಯ ಸುತ್ತಮುತ್ತಲು ಆರೋಗ್ಯ ಇಲಾಖೆಯಿಂದ ಕೈಗೊಳ್ಳುವ ಕೀಟನಾಶಕ ಸಿಂಪರಣೆಗೆ ಸಾರ್ವಜನಿಕರು ಅವಕಾಶ ಸಹಕರಿಸಬೇಕು. ಸ್ವಯಂ ರಕ್ಷಣಾ ಕ್ರಮಗಳಾದ ಮಲಗುವಾಗ ಸೊಳ್ಳೆ ಪರದೆ ಬಳಕೆ ಮಾಡಬೇಕು. ಕಿಟಕಿಗಳಿಗೆ ಸೊಳ್ಳೆಗಳು ನುಸುಳದಂತೆ ಜಾಲರಿ ಅಳವಡಿಸುವುದು. ಆರೋಗ್ಯ ಇಲಾಖೆಯಿಂದ ನೀಡಲ್ಪಡುವ ಲಾರ್ವಹಾರಿ ಗಪ್ಪಿ ಮತ್ತು ಗಂಬೂಷಿಯಾ ಮೀನುಗಳನ್ನು ಶಾಶ್ವತವಾಗಿ ನೀರು ನಿಲ್ಲುವ ಸ್ಥಳಗಳಲ್ಲಿ ಬಿಡಲು ಉಚಿತವಾಗಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ ಹನುಮಂತರಾಯ ತಳ್ಳಳ್ಳಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ. ತಾಯಪ್ಪ, ಶರಣಬಸವ ಪಾಟೀಲ, ಬಸವರಾಜ, ಆರೋಗ್ಯ ನಿರೀಕ್ಷಣಾಧಿಕಾರಿ ಅಶೋಕ ಪಾಟೀಲ, ಅಮರೇಶ್, ಜಗದೀಶ್, ಅಲಿ, ಶಿವಕುಮಾರ್, ಪಿಹೆಚ್‌ಸಿಓ ಹುಲಿಗೆಮ್ಮ, ರಾಧಾ, ಮಲ್ಲಮ್ಮ ಸೇರಿದಂತೆ ಸಿಬ್ಬಂದಿಯವರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

