ಮಸ್ಕಿ, ಜನವರಿ 12:
ಲಯನ್ಸ್ ಕ್ಲಬ್ ಮಸ್ಕಿ, ಹೆಡ್ ಹೆಲ್ಡ್ ಹೈ ಫೌಂಡೇಶನ್ ಮಸ್ಕಿ ಹಾಗೂ ಹೈಟೆಕ್ ಕಂಪ್ಯೂಟರ್ ಶಿಕ್ಷಣ ತರಬೇತಿ ಕೇಂದ್ರ ಮಸ್ಕಿ ಇವರ ಸಂಯುಕ್ತಾಶ್ರಯದಲ್ಲಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 163ನೇ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಮಸ್ಕಿ ತಾಲ್ಲೂಕಿನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಕ್ವಿಜ್ (ರಸಪ್ರಶ್ನೆ) ಕಾರ್ಯಕ್ರಮವನ್ನು ಇಂದು ಗಚ್ಚಿನಮಠ ಮಸ್ಕಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಗೆ ಆರಂಭವಾಗಿದ್ದು, ತಾಲ್ಲೂಕಿನ ವಿವಿಧ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಷ.ಬ್ರ. ಪರಮಪೂಜ್ಯ ಶ್ರೀ ವರ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು (ಗಚ್ಚಿನ ಹಿರೇಮಠ, ಮಸ್ಕಿ) ವಹಿಸಿದ್ದರು. ಲಯನ್ಸ್ ಕ್ಲಬ್ ಮಸ್ಕಿ ಅಧ್ಯಕ್ಷರಾದ ವೀರೇಶ ಹಿರೇಮಠ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಗಂಗಾಧರ ಶಕ್ತಿನಗರ (ಹೆಡ್ ಹೆಲ್ಡ್ ಹೈ ಫೌಂಡೇಶನ್ ತರಬೇತುದಾರರು), ಯಮನೂರ ಕನ್ನಾರಿ (ವ್ಯವಸ್ಥಾಪಕರು, ಹೈಟೆಕ್ ಕಂಪ್ಯೂಟರ್ ಶಿಕ್ಷಣ ತರಬೇತಿ ಕೇಂದ್ರ), ಸಹನಾ ಮಾನ್ವಿ, ರಂಗಯ್ಯ ಸೃಷ್ಟಿ, ಬಿ.ಎಲ್. ಶೆಟ್ಟಿ, ಸಿದ್ದಲಿಂಗಯ್ಯ ಸೊಪ್ಪಿಮಠ, ಕೆ. ನಾಗರಾಜ್, ಡಾ|| ಬಿ.ಎಚ್. ದಿವಟರ್, ಶಿವರಾಜ್ ಇತ್ಲಿ, ಸೋಮಶೇಖರ್, ವಿಜಯಲಕ್ಷ್ಮಿ ಹಿರೇಮಠ, ನಿವೇದಿತ ಬುಳ್ಳ, ವಿನೋದ ಸಿಂಧನೂರ, ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕ್ವಿಜ್ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಶೀಲ್ಡ್ ಹಾಗೂ ಬಹುಮಾನಗಳನ್ನು ನೀಡಲಾಯಿತು. ಜೊತೆಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು ಎಂದು ಆಯೋಜಕರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ವೀರೇಶ ಹಿರೇಮಠ ಅವರು, ವಿದ್ಯಾರ್ಥಿಗಳು ಶ್ರಮಪಟ್ಟು ಅಧ್ಯಯನ ಮಾಡಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆತ್ಮವಿಶ್ವಾಸದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಉತ್ತಮ ಕೌಶಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಇದೇ ವೇಳೆ, ತಂದೆ-ತಾಯಿಗಳು ಹಾಗೂ ಶಿಕ್ಷಕರು ಪಾಠಗಳ ಜೊತೆಗೆ ಮಕ್ಕಳಿಗೆ ಜೀವನ ಮೌಲ್ಯಗಳು ಮತ್ತು ಗುರಿ ಸಾಧಿಸುವ ಮಾರ್ಗವನ್ನು ಕಲಿಸಿಕೊಡುವುದು ಅತ್ಯಂತ ಮುಖ್ಯವೆಂದು ಅವರು ಅಭಿಪ್ರಾಯಪಟ್ಟರು.

