ಮಾನ್ವಿ : ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿನ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಜಾತ್ರಾಮಹೋತ್ಸವದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಶ್ರೀ ಹಂಪಯ್ಯ ನಾಯಕ ಮಾತನಾಡಿ, ಫೆಬ್ರವರಿ 6ರಿಂದ 8ರವರೆಗೆ ನಡೆಯುವ ಗ್ರಾಮದೇವತೆ ಶ್ರೀ ರೇಣುಕಾ ಯಲ್ಲಮ್ಮ ದೇವಿ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ತಾಲೂಕು ಆಡಳಿತ ಅಗತ್ಯ ಎಲ್ಲಾ ಮುನ್ನೆಚ್ಚರಿಕೆ ಹಾಗೂ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸೂಚಿಸಿದರು.
ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಆಗಮಿಸುವ ಹಿನ್ನೆಲೆ ಮೂಲಸೌಕರ್ಯ, ಕುಡಿಯುವ ನೀರು, ವಿದ್ಯುತ್, ಸ್ವಚ್ಛತೆ ಹಾಗೂ ಆರೋಗ್ಯ ಸೇವೆಗಳಿಗೆ ವಿಶೇಷ ಗಮನ ನೀಡಬೇಕು ಎಂದು ತಹಸೀಲ್ದಾರ್ ಶ್ರೀ ಭೀಮರಾಯ ಬಿ. ರಾಮಸಮುದ್ರ ಅವರಿಗೆ ಸೂಚಿಸಿದರು. ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಆಗಮಿಸುವುದರಿಂದ ಅವರ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪಿ.ಐ. ಶ್ರೀ ಸೋಮಶೇಖರ ಕೆಂಚರೆಡ್ಡಿ ಅವರಿಗೆ ಸೂಚನೆ ನೀಡಿದರು. ಜಾತ್ರೆಯ ಯಶಸ್ಸಿಗೆ ತಾಲೂಕು ಆಡಳಿತದ ಜೊತೆಗೆ ಗ್ರಾಮಸ್ಥರೂ ಸಹಕಾರ ನೀಡಿದರೆ ಮಾತ್ರ ಕಾರ್ಯಕ್ರಮ ಸುಗಮವಾಗಿ ನಡೆಯಲಿದೆ ಎಂದು ಹೇಳಿದರು.
ತಹಸೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಮಾತನಾಡಿ, ದೇವಸ್ಥಾನದ ಸೌಲಭ್ಯಗಳ ಜೊತೆಗೆ ಗ್ರಾಮಸ್ಥರು ಸೇವಾ ರೂಪದಲ್ಲಿ ಅಗತ್ಯ ಸಹಕಾರ ನೀಡಬಹುದಾಗಿದೆ. ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ತಾಲೂಕು ಆಡಳಿತ ಹಾಗೂ ದೇವಸ್ಥಾನದ ವತಿಯಿಂದ ಒದಗಿಸಲಾಗುವುದು ಎಂದು ತಿಳಿಸಿದರು.
ಪಿ.ಐ. ಕೆಂಚರೆಡ್ಡಿ ಮಾತನಾಡಿ, ಜಾತ್ರೆ ಸಮಯದಲ್ಲಿ ಪ್ರತಿವರ್ಷ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಭಕ್ತರ ಸುರಕ್ಷತೆಗೆ ಸಿಸಿ ಕ್ಯಾಮೆರಾ ಹಾಗೂ ಬೆಳಕಿನ ವ್ಯವಸ್ಥೆ ಮಾಡಲಾಗುವುದು. ಜಾತ್ರೆಗೆ ಅಂಗಡಿಗಳನ್ನು ಹಾಕುವವರು ರಸ್ತೆ ಬಿಟ್ಟು ವ್ಯವಸ್ಥಿತವಾಗಿ ಹಾಕಿಕೊಳ್ಳಬೇಕು. ಮುಖ್ಯ ರಸ್ತೆಯಿಂದ ಸೀಕಾಲ್ ಮಾರ್ಗವಾಗಿ ಸಂಚಾರ ವ್ಯವಸ್ಥೆ ಬದಲಾಯಿಸಿ ವಾಹನ ದಟ್ಟಣೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಸಿಬ್ಬಂದಿಯ ಜೊತೆಗೆ ಗ್ರಾಮ ಯುವಕರು ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಇಚ್ಛಿಸಿದಲ್ಲಿ ಗುರುತಿನ ಚಿಟಿ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮದ ಮುಖಂಡ ದುರುಗೇಶ ಮಾತನಾಡಿ, ಜಾತ್ರೆಗೆ ಬರುವ ಭಕ್ತರಿಗೆ ಕುಡಿಯಲು ಹಾಗೂ ಸ್ನಾನಕ್ಕೆ ಅನುಕೂಲವಾಗುವಂತೆ ಕಾಲುವೆಗೆ 10 ದಿನಗಳ ಕಾಲ ನೀರು ಬಿಡಬೇಕು. ಕುಡಿಯುವ ನೀರಿನ ಕೊಳವೆಬಾವಿಗಳಿಗೆ ನಿರಂತರ ವಿದ್ಯುತ್ ಒದಗಿಸಬೇಕು. ರಸ್ತೆ ಅತಿಕ್ರಮಣ ತೆರವುಗೊಳಿಸಿ, ಜಾತ್ರೆಗೆ ಆಗಮಿಸುವ ಟ್ರಾಕ್ಟರ್‌ಗಳಿಗೆ ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಗ್ರಾಮಸ್ಥ ಅರಕೇರ ರಾಮಣ್ಣ ಮಾತನಾಡಿ, ದೇವಸ್ಥಾನದ ಜನರೇಟರ್ ದುರಸ್ತಿ ಮಾಡಬೇಕು. ತೆಂಗಿನಕಾಯಿ ಹೊಡೆಯಲು ಪ್ರತ್ಯೇಕ ಸ್ಥಳ ನಿಗದಿಪಡಿಸಬೇಕು. ಅಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನ ವ್ಯವಸ್ಥೆ ಕಲ್ಪಿಸ

